Sri Ramana Maharshigalodane Matukata (Kannada)
ಈ ಕೃತಿಯ ಗ್ರಂಥಕರ್ತರಾದ ಮುನಗಾಲ ಶ್ರಿ ವೆಂಕಟರಾಮಯ್ಯನವರು ಭಗವಾನ್ ಶ್ರಿರಮಣ ಮಹರ್ಷಿಗಳ ಪರಮ ಭಕ್ತರು. ಇವರು 1935ರಿಂದ 1939ರ ಕಾಲಾವಧಿಯಲ್ಲಿ ಬಹಳ ಶ್ರಮವಹಿಸಿ, ಭಗವಾನರು ಹಾಗೂ ದರ್ಶನಾರ್ಥಿಗಳ ನಡುವೆ ಅವರ ಸನ್ನಿಧಿಯಲ್ಲಿ ನಡೆದ ಸಂಭಾಷಣೆಗಳ ವಾಸ್ತವಾಂಶಗಳನ್ನು ದಾಖಲೆ ಮಾಡಿರುತ್ತಾರೆ.
ಪ್ರಪಂಚದ ಎಲ್ಲ ದೇಶ ವಿದೇಶಗಳಿಂದ ವಿಭಿನ್ನ ಮತಾಭಿಮಾನಿಗಳು ಹಾಗೂ ವೃತ್ತಿಪರರು ಬಂದು ಭಗವಾನರ ದಿವ್ಯ ಸಮ್ಮುಖದಲ್ಲಿ ಕುಳಿತು, ತಮಗಿದ್ದ ಆಧ್ಯಾತ್ಮಿಕ ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು. ಅವರ ದರ್ಶನಾರ್ಥಿಗಳು ಪಾಮರರಾಗಲಿ, ಪಂಡಿತರಾಗಲಿ, ಮುಗ್ಧ ಕೃಷಿಕರಾಗಲಿ, ರಾಜಮನೆತನದವರಾಗಲಿ, ಎಲ್ಲರಿಗೂ ಅವರ ಸಮ್ಮುಖದಲ್ಲಿ ಸಮಾನವಾದ ಆದ್ಯತೆ ಇರುತ್ತಿತ್ತು. ಕಾರುಣ್ಯಮೂರ್ತಿಯಾದ ಹಾಗೂ ಅಸಾಧಾರಣ ಅಂತದೃಷ್ಟಿಯುಳ್ಳ ಅವರ ಅನುಗ್ರಹವನ್ನು ಬಯಸಿ ಬಂದ ಯಾರೂ ನಿರಾಶರಾಗಿ ಹಿಂತಿರುಗುತ್ತಿರಲಿಲ್ಲ.
ಸಂದರ್ಶಕರ ಪ್ರಶ್ನೆಗಳು, ಆಧ್ಯಾತ್ಮಿಕ ಅನ್ವೇಷಣೆಯ ಹಾಗೂ ಮಾನಸಿಕ ಸಮಸ್ಯೆಗಳ ವಿಭಿನ್ನ ದೃಷ್ಟಿಕೋನಗಳಿಗೆ ಸಂಬಂಧಿಸಿದ್ದು, ಭಗವಾನರ ಉತ್ತರವು ಸಮಂಜಸವಾದ ಪರಿಹಾರವಾಗಿರುತ್ತಿತ್ತು. ಪ್ರತಿಯೊಂದು ಪ್ರಶ್ನೆಗಳ ಉತ್ತರವು ಕೇಳುವವರ ಆಧ್ಯಾತ್ಮಿಕ ಸಾಧನೆಯ ಪ್ರಗತಿಗನುಸಾರವಾಗಿರುತ್ತಿತ್ತು. ಅವರ ಸನ್ನಿಧಿಯಲ್ಲಿದ್ದವರೆಲ್ಲರಿಗೂ ಸಮಸ್ಯೆಗಳು ಪರಿಹಾರವಾಗಿ ತುಂಬು ಹೃದಯದಿಂದ ಪ್ರಶಾಂತದಿಂದಿರುತ್ತಿದ್ದರು. ಈ ಪುಸ್ತಕವು ಭಗವಾನರ ಸನ್ನಿಧಿಯಲ್ಲಿ ನಡೆದ ಕಾಲಾನುಕ್ರಮವಾದ ಚಾರಿತ್ರಿಕ ಘಟನೆಗಳ ಪ್ರಾಮಾಣಿಕವಾದ ದಾಖಲೆಯಾಗಿರುವುದು.
ಭಗವಾನರ ಸಾನ್ನಿಧ್ಯದಲ್ಲಿರುತ್ತಿದ್ದ ಹುಮ್ಮಸ್ಸು, ವಿನೊದ, ನಿಗೂಢವಾದ ಆಧ್ಯಾತ್ಮಿಕ ಪರಿಸರ, ಇವುಗಳ ವರ್ಣನೆಯನ್ನು ಗಮನಿಸಿದಾಗ, ಸತ್ಯಾನ್ವೇಷಣೆಯ ಮುಮುಕ್ಷುಗಳಿಗೆಲ್ಲರಿಗೂ ಈ ಕೃತಿಯೊಂದು ಅಮೂಲ್ಯವಾಗಿರುವ ಬೊಕ್ಕಸವಾಗಿರುವುದು. ಭಗವಾನರ ಮೂಲ ತತ್ವಬೋಧೆಯಾದ ಆತ್ಮಾನ್ವೇಷಣೆಯೇ ಈ ಕೃತಿಯ ತಿರುಳು. ಹಿಂದು, ಕ್ರಿಶ್ಚಿಯನ್ ಬೌದ್ಧರೇ ಮೊದಲಾದ ಮತಗಳ ತಾತ್ವಿಕ ಪ್ರಶ್ನೆಗಳಿಗೂ ಕೂಡ ಭಗವಾನರು ಉತ್ತರಿಸಿರುವರು. ಪ್ರಶ್ನೆಗಳಿಗೆ ವಿವರಣಾತ್ಮಕವಾದ ವ್ಯಾಖ್ಯಾನವು, ಹಲವು ವಿಭಿನ್ನ ಮತಗಳ ಮಾರ್ಗಗಳ ವೈವಿಧ್ಯತೆಯಲ್ಲಿರುವ ಸಮದರ್ಶಿತ್ವವನ್ನು ಎತ್ತಿ ತೋರಿಸಿರುವುದು.
pp.x+762